ಮಂಡ್ಯದ ಗಂಡು ಸೇರಿದಂತೆ ರೆಬಲ್ ಸ್ಟಾರ್ ಅಂಬರೀಶ್ ಅವರ 23 ಚಿತ್ರಗಳ ನಿರ್ದೇಶಕ ಎ.ಟಿ ರಘು ನಿಧನ
ಬೆಂಗಳೂರು, ಮಾ.21 : ಚಂದನವನದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರ ಫೆವರೇಟ್ ನಿರ್ದೇಶಕರಾಗಿದ್ದ ಎ.ಟಿ ರಘು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಿರ್ದೇಶಕರಾಗಿ ಎ.ಟಿ ರಘು ಗುರುತಿಸಿಕೊಂಡಿದ್ದರು. ಕನ್ನಡ ಸೇರಿದಂತೆ ಹಿಂದಿ, ಮಳಯಾಳಂ, ಕೊಡವ ತಕ್ಕ ಚಿತ್ರರಂಗದಲ್ಲಿ ಕೆಲಸಮಾಡಿದ್ದಾರೆ. ಇವರು ನಿರ್ದೇಶನದ ಜೊತೆಗೆ ನಟನೆ, ನಿರ್ಮಾಣ ಮತ್ತು ಚಿತ್ರಕಥೆ ಬರೆವಣಿಗೆ ವಿಭಾಗಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.
1980ರಲ್ಲಿ ನ್ಯಾಯ, ನೀತಿ, ಧರ್ಮ ಚಿತ್ರ ಇವರ ಮೊದಲ ನಿರ್ದೇಶನದ ಚಿತ್ರವಾಗಿದ್ದು, 2004ರಲ್ಲಿ ಜನಿಫರ್ ಐ ಲವ್ ಯೂ ಇವರು ನಿರ್ದೇಶನದ ಕೊನೆಯ ಚಿತ್ರವಾಗಿದೆ. ಅಂಬರೀಶ ಅವರ ಜೊತೆ ಮಂಡ್ಯದ ಗಂಡು, ಅವಳ ನೆರಳು, ಅಂತಿಮ ತೀರ್ಪು ಸೇರಿದಂತೆ 23 ಚಿತ್ರಗಳನ್ನು ನಿರ್ದೇಶನ ಮಾಡಿ ರೆಬಲ್ ಸ್ಟಾರ್ ಅವರ ನೆಚ್ಚಿನ ನಿರ್ದೇಶಕರಾಗಿ ಹೆಸರು ಮಾಡಿದ್ದರು. ಇವರು ಒಟ್ಟು 55 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಹಿಂದಿಯಲ್ಲಿ ನಟ ರಜನಿಕಾಂತ್ ಜೊತೆ 1984ರಲ್ಲಿ ಮೇರಿ ಅಡಲ್ಟ್ ಎಂಬ ಚಿತ್ರವನ್ನು ನಿರ್ದೇಶನ ಮಾಡಿದರು. ಮಳಯಾಳಂನಲ್ಲಿ ಕುತ್ತುರಾಣಿ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು.
ಎ.ಟಿ ರಘು ಅವರು ಕೊಡಗು ಜಿಲ್ಲೆಯ ಕೊಡವ ಜನಾಂಗದ ಅಪಡಾಂಡ ಮನೆತನದಲ್ಲಿ ಹುಟ್ಟಿದವರು. ಕೊಡವ ಬಾಷೆಯಲ್ಲಿ ದೂರದರ್ಶನಕ್ಕಾಗಿ ಸುಮಾರು 6 ಟೆಲಿ ಸಿರಿಯಲ್ ಗಳನ್ನು ನಿರ್ದೇಶನ ಮಾಡಿದ್ದಾರೆ.
ಇವರ ಕಲಾ ಸೇವೆಗೆ 2004-05ರಲ್ಲಿ ರಾಜ್ಯ ಸರ್ಕಾರದ ಪುಟ್ಟಣ್ಣ ಕಣಗಾಲ ಪ್ರಶಸ್ತಿ, 2020ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಫಿಲಂ ಫಾನ್ಸ್ ಅಸೋಸಿಯೇಶನ್ ಪ್ರಶಸ್ತಿ, ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಲ್ಲಿವೆ.