For the best experience, open
https://m.navayuganews.com
on your mobile browser.
Advertisement

ಬೆಂಗಳೂರು: ಅತಿಯಾದ ಓಲೈಕೆಯೇ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಯಿತು ಎಂದು ಪ್ರತಿಪಕ್ಷ ನಾಯಕ
ಆರ್.ಅಶೋಕ್‌ ಹೇಳಿದ್ದಾರೆ.

Advertisement

ಕಾಂಗ್ರೆಸ್ ರಾಜ್ಯಸಭಾ ಸದಸ್ಯ ನಾಸೀರ್ ಅಹ್ಮದ್ ಅವರ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರವರಿಯಲ್ಲಿ ಸದನದಲ್ಲಿ ಮಾತಾನಾಡುವಾಗ ಅತಿಯಾದ ಮುಸ್ಲಿಂ ಓಲೈಕೆ, ವ್ಯಾಮೋಹ, ತುಷ್ಟೀಕರಣವೇ ಕಾಂಗ್ರೆಸ್ ಪಕ್ಷಕ್ಕೆ ಮುಂದೊಂದು ದಿನ ಮುಳುವಾಗುತ್ತೆ ಎಂದು ಭವಿಷ್ಯ ನುಡಿದಿದ್ದೆ ಎಂದು ಟ್ವೀಟ್‌ ಮಾಡಿ ಹೇಳಿದ್ದಾರೆ.

ಜಮ್ಮು ಕಾಶ್ಮೀರದ ವಿಧಾನಸಭಾ ಚುನಾವಣೆಯ ಫಲಿತಾಂಶ ನನ್ನ ಮಾತನ್ನ ಸಾಬೀತು ಪಡಿಸಿದೆ. ಎಲ್ಲಿಯವರೆಗೂ ಪರ್ಯಾಯ ಆಯ್ಕೆ ಇರುವುದಿಲ್ಲವೋ ಅಲ್ಲಿಯವರೆಗೆ ಮಾತ್ರ ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತಾರೆ ಎಂಬ ಕಟು ಸತ್ಯವನ್ನ ಕಾಂಗ್ರೆಸ್ ಪಕ್ಷ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಮುಸ್ಲಿಂ ಬಾಹುಳ್ಯದ ಕಾಶ್ಮೀರ ಪ್ರಾಂತ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಗತ್ಯವೇ ಇಲ್ಲ ಎನ್ನುವ ಧಾಟಿಯಲ್ಲಿ ಇಂಡಿ ಮಿತ್ರ ಪಕ್ಷ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಓಮರ್ ಅಬ್ದುಲ್ಲಾ ಅವರು ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಬಾಹುಳ್ಯದ ಜಮ್ಮು ಪ್ರಾಂತ್ಯದ ಮೇಲೆ ಗಮನ ಹರಿಸಲು ಬಹಿರಂಗ ಸಲಹೆ ನೀಡಿದ್ದರು. ಆದರೆ ಅತ್ತ ಮುಸ್ಲಿಮರ ಮತಗಳೂ ಇಲ್ಲದೆ, ಇತ್ತ ಹಿಂದೂಗಳ ಮತಗಳೂ ಇಲ್ಲದೆ ಕಾಂಗ್ರೆಸ್ ಪಕ್ಷ ಜಮ್ಮು-ಕಾಶ್ಮೀರದಲ್ಲಿ ಸಂಪೂರ್ಣವಾಗಿ ಸೋತು ಸುಣ್ಣವಾಗಿದೆ ಎಂದು ಟೀಕಿಸಿದ್ದಾರೆ.

2014ರ ವಿಧಾನಸಭಾ ಚುನಾವಣೆಯಲ್ಲಿ ಶೇ.18 ರಷ್ಟು ಮತ ಪ್ರಮಾಣದ ಮೂಲಕ 12 ಸ್ಥಾನ ಗೆದಿದ್ದ ಕಾಂಗ್ರೆಸ್ ಪಕ್ಷ, 2024ರಲ್ಲಿ ಶೇ. 12 ರಷ್ಟು ಮತ ಪಡೆಯುವ ಮೂಲಕ ಕೇವಲ 6 ಸ್ಥಾನಗಳಿಗೆ ಸೀಮಿತವಾಗಿದೆ. ಹಿಂದೂ ಬಾಹುಳ್ಯದ ಜಮ್ಮುವಿನಲ್ಲಿ ಕಾಂಗ್ರೆಸ್ ಪಕ್ಷ ಸ್ಪರ್ಧಿಸಿದ್ದ 29 ಸ್ಥಾನಗಳಲ್ಲಿ ಕೇವಲ 1 ಸ್ಥಾನ ಗೆಲ್ಲಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ಮತ್ತೊಂದು ಕಡೆ 2014ರಲ್ಲಿ 25 ಸೀಟು ಪಡೆದಿದ್ದ ಬಿಜೆಪಿ 2024ರಲ್ಲಿ 29 ಸೀಟು ಪಡೆದಿದೆ.ಶೇ 25.64 ಮತ ಗಳಿಸುವ ಮೂಲಕ ಮತಗಳಿಕೆ ಪ್ರಮಾಣದಲ್ಲಿ ನಷ್ಯಾನಲ್ ಕಾನ್ಫರೆನ್ಸ್ ಪಕ್ಷವನ್ನೂ ಮೀರಿಸಿ ಮೊದಲ ಸ್ಥಾನ ಪಡೆದಿದೆ ಎಂದು ಅಶೋಕ್ ಸಮರ್ಥಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಈಗಲಾದರೂ ಎಚ್ಚೆತ್ತುಕೊಂಡು, ಓಲೈಕೆ, ತುಷ್ಟೀಕರಣದ ರಾಜಕಾರಣ ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದು ಸಲಹೆ ನೀಡಿದ್ದಾರೆ.

Advertisement
Advertisement