ಚಾವಟಿಯಿಂದ ದಂಡಿಸಿಕೊಂಡು ವಿಶಿಷ್ಟ ಪ್ರತಿಭಟನೆ ನಡೆಸಿದ ಅಣ್ಣಾಮಲೈ
ಚೆನ್ನೈ: ಕೊಯಮತ್ತೂರಿನ ಕಾಲಪಟ್ಟಿ ರಸ್ತೆಯಲ್ಲಿರುವ ತಮ್ಮ ಮನೆಯ ಮುಂದೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಮಗೆ ತಾವೇ ಚಾಟಿ ಏಟನ್ನು ಕೊಟ್ಟುಕೊಂಡು ವಿಶಿಷ್ಟ ಪ್ರತಿಭಟನೆ ನಡೆಸಿದರು.
ಹಸಿರು ಧೋತಿ ಧರಿಸಿ, ಶರ್ಟ್ ಧರಿಸದೇ ಮನೆಯಿಂದ ಹೊರಬಂದ ಅಣ್ಣಾಮಲೈ, ಹಗ್ಗದಿಂದ ಮಾಡಿದ ಚಾಟಿಯಿಂದ ಚಾಟಿ ಬೀಸಿಕೊಂಡು ತಮ್ಮ ದೇಹವನ್ನೇ ದಂಡನೆಗೆ ಒಳಪಡಿಸಿದರು.
ಅನೇಕ ಬಾರಿ ಚಾಟಿ ಬೀಸಿಕೊಂಡು ತಮ್ಮ ದೇಹವನ್ನು ದಂಡನೆಗೆ ಒಳಪಡಿಸಿಕೊಂಡರು.ಮತ್ತೆ ಚಾಟಿ ಬೀಸ ಹೊರಟಾಗ ಬಿಜೆಪಿ ಸದಸ್ಯರು ತಡೆದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾ ಮಲೈ, ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣದ ಎಫ್‌ಐಆರ್ ಸೋರಿಕೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.
ದೇವರಿಗೆ ಪ್ರಾರ್ಥನೆ ಸಲ್ಲಿಸುವ ರೀತಿಯಲ್ಲಿ ಈ ಚಾಟಿ ಬೀಸುವ ಪ್ರತಿಭಟನೆಯನ್ನು ಕೈಗೆತ್ತಿಕೊಂಡಿದ್ದೇನೆ ಎಂದು ಅಣ್ಣಾಮಲೈ ತಿಳಿಸಿದರು.
ನಾನು ನಿನ್ನೆ ನನ್ನ ಪಾದಗಳಿಗೆ ಪಾದರಕ್ಷೆ ಧರಿಸುವುದಿಲ್ಲ ಎಂದು ಹೇಳಿದ್ದೇನೆ ಅದರಂತೆ ಅವುಗಳನ್ನು ತೆಗೆದಿದ್ದೇನೆ ಎಂದು ತಿಳಿಸಿದರು.
ಡಿಎಂಕೆಯನ್ನು ಅಧಿಕಾರದಿಂದ ತೆಗೆದುಹಾಕುವವರೆಗೆ ಶೂ ಧರಿಸುವುದಿಲ್ಲ ಎಂದು ಘೊಷಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದಾಗಿ ತಮಿಳುನಾಡಿನಾದ್ಯಂತ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಅಣ್ಣಾಮಲೈ ಇದೇ ವೇಳೆ ತಿಳಿಸಿದರು.