HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಸಿನಿಮಾ ಟಿಕೆಟ್ ದರ 50ರೂ ನಿಂದ 150ರೂಗೆ ಮಿತಿಗೊಳಿಸುವಂತೆ ಒತ್ತಾಯ, 2ನೇ ದಿನಕ್ಕೆ ಕಾಲಿಟ್ಟ ಕಚಸಂವೇ ಧರಣಿ

04:59 PM Oct 22, 2024 IST | ಅಮೃತ ಮೈಸೂರು
Advertisement

ಬೆಂಗಳೂರು: ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರವು ಪಕ್ಕದ ರಾಜ್ಯಗಳಲ್ಲಿರುವಂತೆ ಜಾರಿಗೆ ತರಲು ಒತ್ತಾಯಿಸಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಎರಡನೆ ದಿನಕ್ಕೆ ಕಾಲಿಟ್ಟಿದೆ.

Advertisement

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಡಾ. ರಾಜ್ ಕುಮಾರ್ ಪ್ರತಿಮೆ ಪಕ್ಕದಲ್ಲಿ ಕನ್ನಡ ಚಲನಚಿತ್ರ ಸಂರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಧರಣಿ ನಡೆಯುತ್ತಿದೆ.

ಕನ್ನಡ ಚಿತ್ರರಂಗದ ಭವಿಷ್ಯ, ಯುವ ಪೀಳಿಗೆಯ ಹಿತದೃಷ್ಟಿಯಿಂದ ಹಾಗೂ ಮಧ್ಯಮ ವರ್ಗದ ನಿರ್ಮಾಪಕರು ನಿರ್ದೇಶಕರು, ಸಾಹಿತಿಗಳು, ತಂತ್ರಜ್ಞರು ಕಲಾವಿದರು,ಕಾರ್ಮಿಕರು ಮತ್ತು ರಾಜ್ಯದ ಚಿತ್ರಮಂದಿರಗಳು, ತಂತ್ರಜ್ಞಾನ ಸಂಸ್ಥೆಗಳನ್ನು ಜೋಪಾನ ಮಾಡುವ ದೃಷ್ಟಿಯಿಂದ ಟಿಕೆಟ್ ದರ ನಿಗದಿ ಅನಿವಾರ್ಯ ಆಗಿದೆ.

ಮಧ್ಯಮ ವರ್ಗದ ಸಿನಿಮಾಗಳನ್ನು ಮತ್ತದರ ನಿರ್ಮಾಪಕರನ್ನು, ನಿರ್ದೇಶಕ ತಂತ್ರಜ್ಞರನ್ನು, ಕಲಾವಿದರನ್ನು ರಕ್ಷಿಸುವ ಉದ್ದೇಶದಿಂದ ನಮ್ಮ ರಾಜ್ಯದಲ್ಲಿ ಸಿನಿಮಾ ಟಿಕೆಟ್ ದರ ಕಡಿಮೆ ಆಗಲೇಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.

ಸಿನಿಮಾ ಟಿಕೆಟ್ ದರ 50ರೂ ನಿಂದ 150ರೂಗೆ ಮಿತಿಗೊಳಿಸುವಂತೆ ಒತ್ತಾಯಿಸಿದ್ದಾರೆ.

ಬಜೆಟ್ ಜಾಸ್ತಿ ಹಾಕಿದ್ದಾರೆ ಎಂಬ ಕಾರಣದಿಂದ 4 ರಿಂದ 5 ಸಿನಿಮಾಗಳನ್ನು ನೋಡುವ ಪ್ರೇಕ್ಷಕರ ಹಣವನ್ನು ಒಂದೇ ಸಿನಿಮಾಗೆ ಕಿತ್ತುಕೊಂಡರೇ ಸರಿಯಾಗಲಾರದು.

ಸಿನಿಮಾಗಳನ್ನು ನೋಡಲು ಬಡ, ಯುವ ಪ್ರೇಕ್ಷಕರ ಜೇಬಿನಲ್ಲಿ ಹಣ ಎಲ್ಲಿರುತ್ತದೆ? ಈ ವಾಸ್ತವ ಅಂಶಗಳನ್ನು ಅರಿತು, ಪಕ್ಕದ ರಾಜ್ಯಗಳಲ್ಲಿರುವ ಟಿಕೆಟ್ ದರದ ಹಾಗೆಯೇ ನಮ್ಮಲ್ಲೂ ಇರಬೇಕು ಎಂಬ ನಿಟ್ಟಿನಲ್ಲಿ ಹೋರಾಟ ಪ್ರಾರಂಭಿಸಿದ್ದೇವೆ ಎಂದು ಪ್ರತಿಭಟನಾ ನಿರತರು ತಿಳಿಸಿದ್ದಾರೆ.

ಬಡ ನಿರ್ಮಾಪಕ, ಶ್ರೀಮಂತ ನಿರ್ಮಾಪಕ, ಬಡ ಕಲಾವಿದರು, ಶ್ರೀಮಂತ ಕಲಾವಿದರು, ಬಡ ನಿರ್ದೇಶಕ, ಶ್ರೀಮಂತ ನಿರ್ದೇಶಕ ಎಂಬ ತಾರತಮ್ಯ ಹೋಗಬೇಕು,ಇಲ್ಲಿ ಎಲ್ಲರೂ ಒಂದೆ. ಅವರವರ ಚಿಂತನೆಯಲ್ಲಿ ಬಡತನ ಮತ್ತು ಶ್ರೀಮಂತಿಕೆ ಇದೆಯೇ ಹೊರತೂ, ಅನಾವಶ್ಯಕ ಹಣ ಹಾಕುವುದರಲ್ಲಿ ಅಲ್ಲ.

ಇತ್ತೀಚಿಗೆ ಭಾರೀ ಬಂಡವಾಳದ ಸಿನಿಮಾ ಕಥೆ ಏನಾಯಿತು ಎಂಬುದನ್ನು ಎಲ್ಲರೂ ಅರಿಯಬೇಕು. ಟಿಕೆಟ್ ದರದ ವಿಷಯದಲ್ಲಿ ನಾವು ಪ್ರೇಕ್ಷಕರ ಪರವಾಗಿಯೇ ನಿಲ್ಲಬೇಕು ಮತ್ತು ಅವರ ಆರ್ಥಿಕ ಸ್ಥಿತಿಗತಿಯನ್ನು ತಿಳಿಯಬೇಕು.

ನನ್ನ ಬಳಿ ನೂರು ಕೋಟಿ, ಸಾವಿರ ಕೋಟಿ ಇದೆ ಅಂತ ಎರ್ರಾ ಬಿರ್ರೀ ಸುರಿದು, ಇಡೀ ಸಿನಿಮಾರಂಗದ ವ್ಯವಸ್ಥೆಯನ್ನು ಹಾಳು ಮಾಡಬಾರದು‌ ಎಂದು ಟೇಶಿ ವೆಂಕಟೇಶ್ ಹೇಳಿದ್ದಾರೆ.

ಸಿನಿಮಾದಲ್ಲಿರುವ ಕಥೆ, ಚಿತ್ರಕಥೆ, ಸಾಹಿತ್ಯ, ಸಂಗೀತ, ಸಂಭಾಷಣೆ, ನೃತ್ಯ, ಸಾಹಸ, ನಿರ್ದೇಶಕನ ಸಾಮರ್ಥ್ಯ, ಕಲಾವಿದರ ಪ್ರತಿಭೆ ಮತ್ತಿತರೇ ಅಂಶಗಳ ಶಕ್ತಿಯನುಸಾರ ಸಿನಿಮಾ ಓಡಬೇಕು. ಹಾಗಾಗಿ ಪ್ರೇಕ್ಷಕರಿಗೆ ಟಿಕೆಟ್ ದರ ಒಂದೇ ಸಮನಾಗಿರಬೇಕು.

ಅರ್ಥವಿಲ್ಲದ ಬಂಡವಾಳಗಳಿಂದ ಆಡಂಬರದ ಸಿನಿಮಾಗಳನ್ನು ನಿರ್ಮಿಸಿ, ಇತರೇ ನಾಲ್ಕಾರು ಸಿನಿಮಾಗಳನ್ನು ನೋಡಬಹುದಾದ ಕನ್ನಡ ಪ್ರೇಕ್ಷಕರ ಹಣವನ್ನು ಒಂದೇ ಸಿನಿಮಾಗೆ ಕಸಿದುಕೊಳ್ಳುತ್ತಿರುವ ಅಮಾನವೀಯ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಹೋರಾಟ ಅಗತ್ಯವಿದೆ.

ಹಾಗೂ ಮಧ್ಯಮ ವರ್ಗದ ನಿರ್ಮಾಪಕರ ಬಂಡವಾಳವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಎರಡನೇ‌ ದಿನವೂ ಧರಣಿ ಮಾಡಿದ್ದೇವೆ ಎಂದು ಕನ್ನಡ ಚಲನಚಿತ್ರ ಸಂರಕ್ಷಣಾ ವೇದಿಕೆಯ ಪರವಾಗಿ‌ ಟೇಶಿ ವೆಂಕಟೇಶ್ ತಿಳಿಸಿದ್ದಾರೆ.

Advertisement
Tags :
BangaluruProtest
Advertisement
Next Article