For the best experience, open
https://m.navayuganews.com
on your mobile browser.
Advertisement

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಮತ್ತು ಕನ್ನಡಿಗರನ್ನು ಹೀಯಾಳಿಸುವ ಕೆಲಸ ಆಗುತ್ತಿದೆ, ಇನ್ನು ಮುಂದೆ ಯಾರಾದರೂ ನಿಂದಿಸಿದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

Advertisement

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರೆಸಿ ಅವರು ಮಾತನಾಡಿದರು.

ಎಲ್ಲರಲ್ಲಿಯೂ ಕನ್ನಡ ಅಭಿಮಾನ ಇರಲಿ, ದುರಭಿಮಾನ ಬೇಡ,ಅಭಿಮಾನವಿದ್ದರೆ ಮಾತ್ರ ಕನ್ನಡ ಬೆಳೆಯುತ್ತದೆ. ಕನ್ನಡ ಬಾರದವರ ಜೊತೆಯಲ್ಲಿಯೂ ಕನ್ನಡದಲ್ಲಿಯೇ ಮಾತನಾಡಿ,ಅವರಿಗು ಕನ್ನಡ ಕಲಿಸಬೇಕು, ಆಗ ಕನ್ನಡದ ವಾತಾವರಣ ನಿರ್ಮಾಣವಾಗುತ್ತದೆ ಎಲ್ಲರೂ ಈ ಪ್ರತಿಜ್ಞೆಯನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ, ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ, ಅಂತಹವರ ವಿರುದ್ಧ ಸರ್ಕಾರ ಮುಲಾಜಿಲ್ಲದೇ ಕಠಿಣ ಕ್ರಮ ತಗೊಳ್ಳುತ್ತದೆ. ನಾವು ಕನ್ನಡಿಗರಾಗಿರುತ್ತೇವೆ. ಬೇರೆಯವರನ್ನೂ ಕನ್ನಡಿಗರಾಗಿ ಮಾಡುತ್ತೇವೆ ವ್ಯವಹಾರದಲ್ಲೂ ಕನ್ನಡ ಬಳಸುತ್ತೇವೆ ಎಂದು ಶಪಥ ಮಾಡೋಣ ಎಂದು ತಿಳಿಸಿದರು.

ಕನ್ನಡದ ಅಭಿಮಾನವಿರಲಿ ಬೇರೆ ಭಾಷಿಕರಿಗೂ ಕನ್ನಡ ಕಲಿಸುವ ಕೆಲಸ ಮಾಡಬೇಕು. ಯಾವುದೇ ಧರ್ಮ, ಭಾಷೆ, ಪ್ರಾಂತ್ಯದವರು ಇರಲಿ ಕರ್ನಾಟಕದಲ್ಲಿ ಇರುವವರೆಲ್ಲ ಕನ್ನಡಿಗರೇ.ನಮ್ಮ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಕನ್ನಡ ಶಾಸ್ತ್ರೀಯ ಭಾಷೆ. ನಾವು ನಮ್ಮ ಭಾಷೆಯನ್ನು ಯಾವುದೇ ಕಾರಣಕ್ಕೂ ಬಲಿ ಕೊಟ್ಟು ಉದಾರಿಗಳಾಗಬಾರದು. ಭಾಷೆ ವ್ಯಾಮೋಹವೂ ಅತಿಯಾಗಿರಬಾರದು, ಆದರೆ ಕನ್ನಡ ಅಭಿಮಾನ ಬಿಟ್ಟುಕೊಡಬಾರದು. ಬೇರೆ ಭಾಷೆ ಕಲಿಯಿರಿ, ಆದರೆ ಕನ್ನಡ ಮರೆಯಬೇಡಿ ಎಂದು ಸಿದ್ದರಾಮಯ್ಯ ಹೇಳಿದರು.

ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್, ಶಿಕ್ಷಣ ಸಚಿವ ಮಧುಬಂಗಾರಪ್ಪ ಮತ್ತಿತರರು ಪಾಲ್ಗೊಂಡಿದ್ದರು.

Advertisement
Tags :
Advertisement